ಜುಟ್ಟುವೆ ಬಳ್ಳಿ -
ಆಸ್ಕ್ಲಿಪಿಯಡೇಸೀ ಕುಟುಂಬಕ್ಕೆ ಸೇರಿದ ಒಂದು ಬಹುವಾರ್ಷಿಕ ಕಾಡುಬಳ್ಳಿ. ತಳವಾರನ ಬಳ್ಳಿ, ಉಗುರುಸುತ್ತುಬಳ್ಳಿ ಪರ್ಯಾಯ ನಾಮಗಳು. ಡೀಮಿಯ ಅಥವಾ ಪಗ್ರ್ಯುಲೇರಿಯ ಎಕ್ಸ್‍ಟೆನ್ನ ಇದರ ಶಾಸ್ತ್ರಿಯ ನಾಮ. ಉಷ್ಣವಲಯದ ಮೂಲವಾಸಿ. ಭಾರತ, ಮಲಯ ಮತ್ತು ಆಫ್ರಿಕಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಭಾರತದಲ್ಲಿ ಒಣಹವೆಯಿರುವ ಮೈದಾನ ಸೀಮೆಗಳಿಂದ ಹಿಡಿದು ಹಿಮಾಲಯದಲ್ಲಿ 1000 m . ಎತ್ತರದ ಪ್ರದೇಶಗಳವರೆಗೆ ಇದರ ವ್ಯಾಪ್ತಿ ಉಂಟು. ಇದು ಬೇರೆ ಆಸರೆ ಸಸ್ಯಗಳ ಮೇಲೆ ಹಬ್ಬಿಕೊಂಡು ಇಲ್ಲವೆ ನೆಲದ ಮೇಲೆ ಹರಡಿಕೊಂಡು ಬಳೆಯುವ ಬಳ್ಳಿ. ಕಾಂಡ ಮತ್ತು ಎಲೆಗಳನ್ನು ಕತ್ತರಿಸಿದರೆ ಬಿಳಿಯ ಬಣ್ಣದ ಹಾಲ್ನೊರೆ ಒಸರುತ್ತದೆ. ಎಲೆಗಳುಗುಂಡಿಗೆಯಾಕಾರದವು ಇಲ್ಲವೆ ಅಂಡಾಕಾರದವು. ಹೂಗಳು ಎಲೆಗಳ ಕಂಕುಳಲ್ಲಿ ಕಾರಿಂಬ್ ಇಲ್ಲವೆ ಅಂಬೆಲ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳ ಬಣ್ಣ ಮಾಸಲು ಬಿಳಿ ಅಥವಾ ಹಸಿರು ಮಿಶ್ರಿತ ಹಳದಿ. ಪುಷ್ಪಪತ್ರ 5 ಹಾಲೆಗಳುಳ್ಳದ್ದು, ಕಾಯಿಯಲ್ಲೂ ಉಳಿದಿರುತ್ತದೆ. ದಳಗಳ 5. ಗಂಟೆಯಾಕಾರದಲ್ಲಿ ಪರಸ್ಪರ ಕೂಡಿಕೊಂಡಿವೆ. ಫಲ ಜೋಡಿ ಫಾಲಿಕಲ್ ಮಾದರಿಯದು. ಒಂದೊಂದು ಭಾಗವೂ ಭರ್ಜಿಯಾಕಾರದ್ದು. ಹೊರಮೈಮೇಲೆ ಮೃದುವಾದ ಮುಳ್ಳುಗಳುಂಟು. ಜುಟ್ಟುವೆಬಳ್ಳಿ ಜಂತು ನಾಶಕ, ವಿರೇಚಕ, ಜ್ವರಹಾರಿ, ಮೂತ್ರೋತ್ತೇಜಕ, ಕಫಹರ ಎಂದು ಹೆಸರಾಗಿದೆ. ಎಲೆಗಳಿಗೆ ಒಂದು ತೆರನ ಅಸಹ್ಯವಾಸನೆ ಉಂಟು. ಎಲೆಗಳ ರಸವನ್ನು ಮಕ್ಕಳ ಅತಿಸಾರ ನಿವಾರಣೆಗೂ ಕಷಾಯವನ್ನು ಉಬ್ಬಸದ ಚಿಕಿತ್ಸೆಗೂ ಕೊಡುವುದುಂಟು. ಎಲೆಯ ರಸವನ್ನು ಶುಂಠಿ ರಸದೊಂದಿಗೆ ಸೇರಿಸಿ ಸಂಧಿವಾತ ಚಿಕಿತ್ಸೆಗೆ, ತುಪ್ಪದೊಂದಿಗೆ ಸೇರಿಸಿ ಮೂಲವ್ಯಾಧಿಗೆ, ಸುಣ್ಣದೊಂದಿಗೆ ಸೇರಿಸಿ ಸಂದಿವಾತದ ಬಾವುಗಳಿಗೆ ಕೊಡಲಾಗುತ್ತದೆ. ಬಳ್ಳಿಯ ಸಾರವನ್ನು ಗರ್ಭಾಶಯ ಹಾಗೂ ಮುಟ್ಟಿನ ತೊಂದರೆಗಳ ನಿವಾರಣೆಗೆ ಬಳಸುವುದುಂಟು. 
(ಎಸ್.ಐ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ